ಊ ತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮೂವರು ಅಪ್ರಾಪ್ತ ಸಹೋದರಿಯರು ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದ್ದು, ಇದರ ಹಿಂದೆ 'ಲವ್ ಗೇಮ್' ಎಂಬ ಕೊರಿಯನ್ ಆನ್‌ಲೈನ್ ಗೇಮ್‌ಗೆ ಅಡಿಕ್ಟ್ ಆಗಿದ್ದುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೃತಪಟ್ಟ ಸಹೋದರಿಯರು ಆನ್‌ಲೈನ್‌ನಲ್ಲಿ ಟಾಸ್ಕ್ ಆಧಾರಿತ ಗೇಮ್ ಆಡುತ್ತಿದ್ದರು. ಮಕ್ಕಳು ಅತಿಯಾಗಿ ಗೇಮ್ ಆಡುವುದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಇಂತಹ ಘಟನೆಗಳು ಕೇವಲ ಘಾಜಿಯಾಬಾದ್‌ಗೆ ಸೀಮಿತವಾಗಿಲ್ಲ; ಇತ್ತೀಚೆಗೆ ಪುಣೆಯ ಪಿಂಪ್ರಿ-ಚಿಂಚವಾಡ್‌ನಲ್ಲಿ 16 ವರ್ಷದ ಬಾಲಕ 'ಲೋಗ್ ಔಟ್' ಎಂದು ಚೀಟಿ ಬರೆದಿಟ್ಟು 14ನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದ. ಲಕ್ನೋ, ಮಧುರೈ ಹಾಗೂ ಗ್ವಾಲಿಯರ್‌ನಲ್ಲೂ ಆನ್‌ಲೈನ್ ಗೇಮ್‌ನಿಂದ ಹಣ ಕಳೆದುಕೊಂಡೋ, ಆ ಗೇಮ್‌ಗೆ ಅಡಿಕ್ಟ್ ಆಗಿಯೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳು ಹೆತ್ತವರಲ್ಲಿ ಕಳವಳಕಾಕ್ಕೆ ಕಾರಣವಾಗಿದೆ.
ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಪ್ರತ್ಯೇಕವಾದ ಏಕರೂಪದ ಕಾನೂನಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) 2000ರ ಅಡಿಯಲ್ಲಿ 2023ರಲ್ಲಿ ತಂದ ಹೊಸ ನಿಯಮಗಳು ಹಣದ ವ್ಯವಹಾರವಿರುವ ಗೇಮ್‌ಗಳ ಮೇಲೆ ಕಠಿಣ ನಿಗಾ ಇಡುತ್ತವೆ. ಗೇಮಿಂಗ್ ಕಂಪನಿಗಳು ಬಳಕೆದಾರರ ಸುರಕ್ಷತೆ ಮತ್ತು ದೂರು ನಿವಾರಣಾ ವ್ಯವಸ್ಥೆಯನ್ನು ಹೊಂದುವುದು ಕಡ್ಡಾಯವಾಗಿದೆ. ಒಂದು ವೇಳೆ ಮಕ್ಕಳಿಗೆ ಆನ್‌ಲೈನ್ ಗೇಮಿಂದಲೋ ಅಥವಾ ಇತರ ಆನ್‌ಲೈನ್ ವೆಬ್ಸೈಟ್ ಮೂಲಗಳಿಂದಲೋ ಬೆದರಿಕೆ ಅಥವಾ ಆರ್ಥಿಕ ವಂಚನೆಯಾದಲ್ಲಿ ಸೈಬರ್ ಅಪರಾಧ ಕಾಯ್ದೆ ಹಾಗೂ ಪೋಕ್ಸೋ (POCSO) ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಜೂಜು ಮತ್ತು ಬೆಟ್ಟಿಂಗ್ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುವುದರಿಂದ ಗೇಮಿಂಗ್ ಮೇಲಿನ ನಿಷೇಧವು ಆಯಾ ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.
ಪೋಷಕರು ಮತ್ತು ಶಾಲೆಗಳ ಪಾತ್ರ: ಮಕ್ಕಳಲ್ಲಿ ದಿಢೀರ್ ಕೋಪ, ಏಕಾಂತ ಬಯಸುವಿಕೆ, ನಿದ್ರಾಹೀನತೆ, ಓದಿನಲ್ಲಿ ಹಿನ್ನಡೆ ಹಾಗೂ ಮೊಬೈಲ್ ಬಗ್ಗೆ ಅತಿಯಾದ ಗೌಪ್ಯತೆ ಕಂಡುಬಂದರೆ ಪೋಷಕರು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಮೊಬೈಲ್‌ನಲ್ಲಿ 'ಪೇರೆಂಟಲ್ ಕಂಟ್ರೋಲ್' ಅಳವಡಿಸುವುದು ಮತ್ತು ಸ್ಕ್ರೀನ್ ಟೈಮ್ ಮಿತಿಗೊಳಿಸುವುದು ಅತ್ಯಗತ್ಯ. ಶಾಲೆಗಳಲ್ಲಿ ಡಿಜಿಟಲ್ ಸುರಕ್ಷತೆಯ ಬಗ್ಗೆ ಆಪ್ತಸಮಾಲೋಚನೆ ನಡೆಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಯಾವುದೇ ಸೈಬರ್ ವಂಚನೆ ಅಥವಾ ಬೆದರಿಕೆ ಕಂಡುಬಂದಲ್ಲಿ ಕೂಡಲೇ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಿ ದೂರು ನೀಡಬಹುದಾಗಿದೆ.
No comments:
Post a Comment